ಮುಂಡಗೋಡ
ಕರ್ನಾಟಕ ರಾಜ್ಯದ ಉತ್ತರ ಕನ್ನಡ ಜಿಲ್ಲೆಯ ಒಂದು ತಾಲ್ಲೂಕು ಮತ್ತು ಆ ತಾಲ್ಲೂಕಿನ ಆಡಳಿತ ಕೇಂದ್ರ. ಪಶ್ಚಿಮಕ್ಕೆ ಯಲ್ಲಾಪುರ, ದಕ್ಷಿಣಕ್ಕೆ ಶಿರಸಿ ತಾಲ್ಲೂಕುಗಳೂ ಉತ್ತರ ಮತ್ತು ಪೂರ್ವದಿಕ್ಕಿನಲ್ಲಿ ಧಾರವಾಡ ಜೆಲ್ಲೆಯ ಕಲಘಟಗಿ. ಶಿಗ್ಗಾಂವಿ ಮತ್ತು ಹಾನಗಲ್ಲು ತಾಲ್ಲೂಕುಗಳೂ ಇವೆ. ತಾಲ್ಲೂಕನ್ನು ನಾಲ್ಕು ವಿಭಾಗಗಳಾಗಿ ವಿಂಗಡಿಸಿದೆ. ಒಟ್ಟು 94 ಗ್ರಾಮಗಳುಂಟು. ಜನಸಂಖ್ಯೆ 90,707 (2001).

	ಮುಂಡಗೋಡ ಮಲೆನಾಡು ಪ್ರದೇಶ. ಇದರ ವಾಯುವ್ಯ ಭಾಗದಲ್ಲಿ ಬೇಡ್ತಿ ನದಿ ಹರಿದು ಯಲ್ಲಾಪುರ ತಾಲ್ಲೂಕನ್ನು ಬೇರ್ಪಡಿಸಿದೆ. ತಾಲ್ಲೂಕು ಸಣ್ಣ ಪುಟ್ಟ ಬೆಟ್ಟಗುಡ್ಡಗಳಿಂದ ಕೂಡಿದೆ. ಅರಣ್ಯಪ್ರದೇಶದಲ್ಲಿ ಸಾಗುವಾನಿತೋಪುಗಳಿವೆ. ಕೆರೆಗಳಿಂದಲೂ ಸಣ್ಣಪುಟ್ಟ ತೊರೆಗಳಿಂದಲೂ ಜಲಸಮೃದ್ಧವಾಗಿದೆ. ಸರಾಸರಿ ವಾರ್ಷಿಕ ಮಳೆ 3,200 ಮಿಮೀ. ಹೆಚ್ಚು ಭಾಗ ಫಲವತ್ತಾದ ಜಿಗುಟು ಕರಿ ಮಣ್ಣಿನಿಂದ ಮತ್ತು ಜಂಬುಮಣ್ಣಿನಿಂದ ಕೂಡಿದೆ. ಇಲ್ಲಿಯ ಮುಖ್ಯ ಬೆಳೆ ಬತ್ತ, ಜೋಳ, ತೊಗರಿ, ಅಡಿಕೆ ಮತ್ತು ಇತರ ತೋಟದ ಬೆಳೆಗಳನ್ನೂ ಬೆಳೆಸುತ್ತಾರೆ. ಪಶುಪಾಲನೆಯುಂಟು.

	ತಾಲ್ಲೂಕಿನಲ್ಲಿ ವಿದ್ಯುತ್ತು, ಅಂಚೆ, ತಂತಿ, ದೂರವಾಣಿ ಸೌಕರ್ಯಗಳಿವೆ. ವ್ಯಾಪಾರ ವಾಣಿಜ್ಯಕ್ಕೆ ಆರ್ಥಿಕ ನೆರವು ನೀಡುವ ವಾಣಿಜ್ಯಕ್ಕೆ ಆರ್ಥಿಕ ನೆರವು ನೀಡುವ ವಾಣಿಜ್ಯ ಮತ್ತು ಸಹಕಾರ ಬ್ಯಾಂಕುಗಳಿವೆ. ಅಕ್ಕಿ ಗಿರಣಿಗಳು, ಸರ್ಕಾರಿ ಔಷಧಾಲಯ, ಕೃಷಿ ತರಬೇತಿ ಶಾಲೆ ಮತ್ತು ಇತರ ಶಾಲೆಗಳೂ ಇವೆ. ಮಂಗಳೂರು-ಮುಂಬಯಿ, ಕಾರವಾರ-ಧಾರವಾಡಗಳ ಹೆದ್ದಾರಿಗಳು ಈ ತಾಲ್ಲೂಕಿನ ಮೂಲಕ ಹಾದು ಹೋಗಿವೆ.

	ಮುಂಡಗೋಡ ತಾಲ್ಲೂಕಿನ ಆಡಳಿತಕೇಂದ್ರ. ಇದು ತಾಲ್ಲೂಕಿನ ಪೂರ್ವ ಅಂಚಿನಲ್ಲಿದೆ. ಜನಸಂಖ್ಯೆ 16,171  (2001). ಈ ಊರಿನ ಸುತ್ತಲೂ ಬತ್ತ, ಜೋಳ, ದ್ವಿದಳ ಧಾನ್ಯಗಳನ್ನು ಬೆಳೆಸುವರು.

	ಬೇಸಾಯ ಮತ್ತು ಪಶುಪಾಲನೆ ಇಲ್ಲಿಯ ಮುಖ್ಯವೃತ್ತಿ. ಉತ್ತಮತಳಿಯ ಜಾನುವಾರುಗಳನ್ನು ಸಾಕುವರು. ಹಾಲು ಮತ್ತು ಹಾಲಿನ ಉತ್ಪನ್ನಗಳನ್ನು ಸಮೀಪದ ಪಟ್ಟಣಗಳಿಗೆ ಸಾಗಿಸುವರು. ವ್ಯಾಪಾರ ಸಂಪರ್ಕ 64ಕಿ ಮೀ. ದೂರದ ಹುಬ್ಬಳ್ಳಿಯೊಂದಿಗೆ ಹೆಚ್ಚು. ಇಲ್ಲಿಂದ 4 ಕಿಮೀ. ದೂರದಲ್ಲಿರುವ ಇಂದೂರು ಮತ್ತು ಕುಸೂರು ಎಂಬಲ್ಲಿ ಎರಡೂವರೆ ಸಾವಿರ ಮಂದಿ ಟಿಬೆಟಿಯನ್ ನಿರಾಶ್ರಿತರಿಗೆ ಆಶ್ರಯ ಕಲ್ಪಿಸಲಾಗಿದೆ. ಇವರು ಹೆಚ್ಚಾಗಿ ಜೋಳದ ಬೇಸಾಯ ಮಾಡುತ್ತಾರೆ. 

	ಇಲ್ಲಿ ಒಂದು ನಗರ ಪಂಚಾಯಿತಿ ಇದೆ. ನಗರಕ್ಕೆ ವಿದ್ಯುತ್ ಪೂರೈಕೆ ಮತ್ತು ನಲ್ಲಿನೀರಿನ ಸೌಕರ್ಯಗಳಿವೆ. ಈ ಸ್ಥಳ ಮಂಗಳೂರು-ಮುಂಬಯಿ, ಕಾರವಾರ-ಧಾರವಾಡಗಳ ಹೆದ್ದಾರಿಯೊಂದರ ಮೇಲಿರುವ ಕಾರಣ ಹೆಚ್ಚಿನ ವಾಹನ ಸಂಚಾರದಿಂದ ಕೂಡಿದೆ.

	ಇಲ್ಲಿಂದ 16 ಕಿಮೀ. ದಕ್ಷಿಣಕ್ಕೆ ಧರ್ಮಾಜಲಾಶಯ ಮತ್ತು ಧರ್ಮಾ ವಸಾಹತುಗಳಿವೆ. ಇಲ್ಲಿ ಒಂದು ಕೃಷಿತರಬೇತಿ ಶಾಲೆಯೂ ಇತರ ಶಾಲೆಗಳೂ ಇವೆ. ಆರೋಗ್ಯಕೇಂದ್ರವುಂಟು. 

	1754ರಲ್ಲಿ ಮುಂಡಗೋಡವನ್ನು ಮಾಧವರಾಮ ಪೇಶ್ವೆ ಆಕ್ರಮಿಸಿಕೊಂಡಿದ್ದ ಕರ್ನಲ್ ವೆಲ್ಲೆಸ್ಲಿ ಮುಂಡಗೋಡವನ್ನು ಒಂದು ಮುಖ್ಯ ಸರಹದ್ದು ಪ್ರದೇಶವೆಂದೂ ಇಲ್ಲಿಯ ಕೋಟೆ ರಕ್ಷಣೆಗೆ ಮುಖ್ಯವೆಂದೂ ತನ್ನ ಅನೇಕ ಪತ್ರಗಳಲ್ಲಿ ಕಾಣಿಸಿದ್ದಾನೆ. ಶ್ರೀರಂಗಪಟ್ಟಣದ ಪತನದ ಅನಂತರ ಈ ಊರು ಮರಾಠ ಸೇನಾಧಿಪತಿ ಗೋಖಲನ ದಾಳಿಗೆ ತುತ್ತಾಯಿತು. ಮುಂದೆ ಬ್ರಿಟಿಷರು ಆಡಳಿತಕ್ಕೆ ಸೇರಿಹೋಯಿತು.
 *

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ